ಕಾರವಾರ: ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಕುಟುಂಬದ ಯಜಮಾನಿಗೆ ಮಾಹೆಯಾನ ರೂ 2000 ದಂತೆ ನೀಡುವ ಗೃಹಲಕ್ಷ್ಮಿ ಯೋಜನೆಗೆ, ಅಂತ್ಯೋದಯ ,ಬಿಪಿಎಲ್ ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಾಗಿರುವ ಯಜಮಾನಿ ಅಥವಾ ಯಜಮಾನ ಆದಾಯ ತೆರಿಗೆ ಪಾವತಿಸದೇ ಇರುವ ಅಥವಾ ಜಿಎಸ್ಟಿ ರಿಟನ್ರ್ಸ್ ಮಾಡದೇ ಇರುವ ಕುಟುಂಬದ ಓರ್ವ ಮಹಿಳೆ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಜಿಲ್ಲೆಯಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಲಿಚ್ಛಿಸುವ ಮಹಿಳೆಯರು ತಮ್ಮ ಅರ್ಜಿಯನ್ನು ನೊಂದಾಯಿಸಿಕೊಳ್ಳಲು , ಜಿಲ್ಲೆಯ207 ಗ್ರಾಮ ಒನ್ ಕೇಂದ್ರಗಳಲ್ಲಿ , 229 ಬಾಪೂಜಿ ಕೆಂದ್ರಗಳಲ್ಲಿ , 21 ಕರ್ನಾಟಕ ಒನ್ ಕೇಂದ್ರಗಳಲ್ಲಿ ಹಾಗೂ 31 ಸ್ಥಳೀಯ ನಗರ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ 7,10,913 ಮಹಿಳೆಯರು ಇದ್ದು, ಅವರಲ್ಲಿ ಈ ಯೋಜನೆಯ ಸೌಲಭ್ಯ ಪಡೆಯಲು 3,46,835 ಮಹಿಳೆಯರು ಅರ್ಹರಿರುವರೆಂದು ಗುರುತಿಸಲಾಗಿದೆ. ಅರ್ಹರೆಂದು ಗುರುತಿಸಿದ ಮಹಿಳೆಯರಲ್ಲಿ ಈ ವರೆಗೆ 2,96,145 ಮಹಿಳೆಯರು ಯೋಜನೆಗೆ ಅಧಿಕೃತವಾಗಿ ನೋಂದಾಯಿಸುವುದರ ಮೂಲಕ ಶೇ. 85.38 ರಷ್ಷು ಪ್ರಗತಿಯನ್ನು ಸಾಧಿಸಲಾಗಿದೆ. ಜಿಲ್ಲೆಯು ಈ ಯೋಜನೆಯ ಪ್ರಗತಿಯಲ್ಲಿ ರಾಜ್ಯ ಮಟ್ಟದಲ್ಲಿ 10 ನೇ ಸ್ಥಾನದಲ್ಲಿದ್ದು, ಸೆ.30 ರಂದು ಯೋಜನೆಯು ಅಧಿಕೃತವಾಗಿ ಉದ್ಘಾಟನಗೊಳ್ಳಲಿದೆ.
ಸದ್ರಿ ದಿನದಂದು ಜಿಲ್ಲಾ ಮಟ್ಟದ ಕಾರ್ಯಕ್ರಮವು ಜಿಲ್ಲಾ ಪೊಲೀಸ್ ಕಲ್ಯಾಣ ಮಂಟಪದಲ್ಲಿ, ತಾಲೂಕು ಮಟ್ಟದಲ್ಲಿ ಸ್ಥಳಿಯ ನಗರ ಸಂಸ್ಥೆಗಳಲ್ಲಿಯೂ ಹಾಗೂ ಗ್ರಾಮ ಮಟ್ಟದಲ್ಲಿ 229 ಗ್ರಾಮ ಪಂಚಾಯತಿಗಳಲ್ಲಿ ಕಾರ್ಯಕ್ರಮವನ್ನು ಏಕಕಾಲದಲ್ಲಿ ಆಯೋಜಿಸಲಾಗಿರುತ್ತದೆ. ಜೊತೆಗೆ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮ ನೇರ ಪ್ರಸಾರ ಬಿತ್ತರಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ.
ಪ್ರಸ್ತುತ ಜಿಲ್ಲೆಗೆ ಈ ಯೋಜನೆಯಡಿಯಲ್ಲಿ ಒಟ್ಟು ರೂ.58,02,48,000 ಅನುದಾನ ಬಿಡುಗಡೆಯಾಗಿರುತ್ತದೆ. ಈ ಬಿಡುಗಡೆಯಾದ ಅನುದಾನದಲ್ಲಿ ಎನ್.ಪಿ.ಸಿ.ಐ ಯಿಂದ ಪರಿಶೀಲಿಸಿ ಆರ್ಹರೆಂದು ಬಂದಿರುವ ಒಟ್ಟು 1,17,335 ಫಲಾನುಭವಿಗಳಿಗೆ ತಲಾ ರೂ. 2000/- ದಂತೆ ಒಟ್ಟು ರೂ. 23,46,70,000/- ಧನ ಸಹಾಯವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅರ್ಹರಿರುವ ಎಲ್ಲ ಯಜಮಾನಿ ಮಹಿಳೆಯರಿಗೆ ಧನ ಸಹಾಯ ನೀಡಲು ಕ್ರಮ ವಹಿಸಲಾಗಿದೆ.
ಆಗಸ್ಟ್ 30 ರಂದು ಜಿಲ್ಲಾ ಮಟ್ಟದಲ್ಲಿ, ಬೆಳಗ್ಗೆ 10 ಗಂಟೆಯಿಂದ ಜಿಲ್ಲಾ ರಂಗಮಂದಿರದಿಂದ ಪೊಲೀಸ್ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡಯಲಿದ್ದು, ತಾಲ್ಲೂಕಾ ಮಟ್ಟದಲ್ಲಿ ಹಾಗೂ ಎಲ್ಲ ಗ್ರಾಮ ಪಂಚಾಯತ್ಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.